Kannada CADD Nest Private Limited

ಜೀವನದಲ್ಲಿ ಯಶಸ್ಸು ಪಡೆಯಬೇಕೆ? ಪ್ರೇರಣಾ ಶಕ್ತಿ ನಿಮ್ಮದಾಗಿಸಿಕೊಳ್ಳಿ

ಜೀವನದಲ್ಲಿ ಯಶಸ್ಸು ಪಡೆಯಬೇಕೆ? ಪ್ರೇರಣಾ ಶಕ್ತಿ ನಿಮ್ಮದಾಗಿಸಿಕೊಳ್ಳಿ
  • ಸ್ನೇಹಾ

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಪದ ಪ್ರೇರಣೆ.  ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಲು ಪ್ರೇರೇಪಿಸುವುದೇ, ಪ್ರೋತ್ಸಾಹಿಸುವುದೆ  ಈ ಪ್ರೇರಣೆ.ಲ್ಯಾಟಿನ್ ನ ‘ಎಮೋವರ್’ ಎಂಬ ಪದದಿಂದ ಜನನಗೊಂಡಿರುವುದೆ ಈ ಪ್ರೇರಣಾ ಎಂಬ ಪದ. ಅಸಾಧ್ಯ ಎಂಬ ಮೂರಕ್ಷರದ ಮೂಢನಂಬಿಕೆಗೆ ಬರೆಯೆಳೆಯುವ ಸತ್ಕಾರ್ಯ ಮಾಡಿ ಸಾಧ್ಯ ಎಂಬ ಎರಡಕ್ಷರದ ಬೆಳಕು ಪ್ರತಿಯೊಬ್ಬರಲ್ಲೂ ಮೂಡಿಸುವುದೇ ಪ್ರೇರಣೆ. ಉತ್ತರ ಇಲ್ಲದಿರುವ ಅಂದರೆ, ಹೇಗಪ್ಪಾ ಕೆಲಸ ಮಾಡೋದು?, ಈ ಕೆಲ್ಸ ನನ್ನಿಂದ ಸಾಧ್ಯನಾ? ನನ್ನಿಂದ ಈ ಗೇಮ್ ಗೆಲ್ಲೋಕೆ ಆಗುತ್ತಾ?, ನಾನು ಸಾಧನೆ ಮಾಡಬಹುದಾ? ಈ ರೀತಿಯ ಅದೆಷ್ಟೋ ಗೊಂದಲಗಳಿಗೆ, ಪ್ರಶ್ನೆಗಳಿಗೆ ಪ್ರೇರಣೆ ಉತ್ತರವನ್ನು ಸಹ ನೀಡುತ್ತದೆ.

ನಿಮ್ಮ ಜೀವನ ಶೈಲಿ, ಸಂಸ್ಕೃತಿ, ಸುತ್ತಮುತ್ತಲಿನ ಸಮಾಜ ಹಾಗು ಸಹಜತೆ ಇವೆಲ್ಲವೂ ಪ್ರೇರಣೆಯ ಮುಖ್ಯ ಅಂಶಗಳು. ಈ ನಾಲ್ಕು ಅಂಶಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವಾ ವೃದ್ಧಿಸುವ ಲಾಂಛನಗಳಾಗಿವೆ ಇದಕ್ಕೆ ಮುಖ್ಯ ಅಡಿಪಾಯವೇ ಪ್ರೇರಣೆ

ಮನೋವಿಜ್ಞಾನದಲ್ಲೂ  ಪ್ರೇರಣೆಗೆ ಮಹತ್ವದ ಸ್ಥಾನವಿದೆ. ಬಹಳಷ್ಟು ಮನೋವಿಜ್ನ್ಯಾನಿಗಳು ಹೇಳೋ ಪ್ರಕಾರ, ಒಬ್ಬ ವ್ಯಕ್ತಿಯ ಯಶಸ್ಸಿನ ಮುಖ್ಯ ಅಡಿಪಾಯವೇ ಪ್ರೇರಣೆ. ಪ್ರೇರಣೆ ಇಲ್ಲದೆ ಯಾವ ಕಾರ್ಯವೂ ಸತ್ಕಾರ್ಯವಾಗದು, ಯಾಕಂದ್ರೆ, ಪ್ರೇರಣೆ ಇಲ್ಲದ ಕಾರ್ಯಗಳೆಲ್ಲವೂ ಸತ್  ಕಾರ್ಯವಾಗುತ್ತೆ. ಗುರಿ ಹಾಗು ಆದ್ಯತೆ ಇವೆರಡನ್ನು ಒಳಗೊಂಡಿರುವ ಪ್ರಕ್ರಿಯೆ ಪ್ರೇರಣೆ ಏಕಂದ್ರೆ, ಪ್ರತಿ ಒಬ್ಬರಿಗೂ ಹತ್ತು ಹಲವಾರು ಗುರಿಗಳಿರುತ್ತೆ, ಆ ಗುರಿಗಳಲ್ಲಿ ಒಂದಷ್ಟು ಆದ್ಯತೆಗಳಿರುತ್ತೆ. ಅದೇ ಆದ್ಯತೆಯ ಪ್ರಕಾರವೆ ಮುನ್ನುಗ್ಗಿ ಸಾಧನೆಯ ಪಥವನ್ನು ಹಿಡಿಯಲು ಸಾಥು ಕೊಡೊ ಪ್ರಕ್ರಿಯೆ ಪ್ರೇರಣಾ. ಜೊತೆಗೆ ಅಗತ್ಯಗಳು ಪ್ರೇರಣೆಯಲ್ಲಿ ಪಾಲ್ಗೊಳ್ಳುತ್ತವೆ. ಉದಾಹರಣೆಗೆ, ಒಬ್ಬ ವ್ಯಕ್ತಿಯ ಕನಸು ಬೆಂಗಳೂರು ಎಂಬ ಮಹಾನಗರಿಯಲ್ಲಿನ ದೊಡ್ಡ ಉದ್ದಿಮೆ ಒಂದರಲ್ಲಿ ಕೆಲಸಗಳಿಸುವುದಾದರೆ ಅದಕ್ಕೆ ಆತ ಕೈಗೊಳ್ಳ ಬೇಕಾದ ಒಂದಷ್ಟು ಅಗತ್ಯಗಳು ಇರುತ್ತವೆ, ಅಂದರೆ, ಆತ ಆ ಕಂಪನಿಯ ಬಗ್ಗೆ ತಿಳಿಯೋದು, ಕಂಪನಿಯ ಕೆಲ್ಸದ ಬಗ್ಗೆ ಓದೋದು ಹೀಗೆ ಇನ್ನಿತರ ಅಗತ್ಯಗಳು.

ನಮ್ಮ ಗುರಿಗಳನ್ನು ತಲುಪಲು ಪ್ರೇರಣೆಯೆ ಮಹತ್ ಸೂತ್ರ. ನೀವು ಕೂಡ ನಿಮ್ಮ ಜೀವನವನ್ನು ಬದಲಾಯಿಸಲು ಇಚ್ಛೆ ಇದ್ದರೆ, ನೀವು ನಿಮ್ಮ ಜೀವನದಲ್ಲಿ ಸಾಧಿಸಬೇಕು ಅನ್ನೋ ಛಲ ಇದ್ರೆ, ಗುರಿಗಳನ್ನು ತಲುಪುವ ಆಸಕ್ತಿ ಇದ್ರೆ ಪ್ರೇರಣಾ ಶಕ್ತಿ ಇರಲೇ ಬೇಕು.

ಪ್ರೇರಣೆಯ ವಿಧಗಳು

ಮುಖ್ಯವಾಗಿ ಪ್ರೇರಣೆಯಲ್ಲಿ ಎರಡು ವಿಧಾನ ಅದುವೆ, ಎಲ್ಲಿಂದ ಮತ್ತು ಎಲ್ಲಿಗೆ. ಇವೆರಡರಲ್ಲಿ, ನಿಮಗೆ ಯಾವುದೇ ಗೊಂದಲಗಳಿಲ್ಲದೇ ಇದ್ರೆ, ಶೇಕಡ ನೂರರಷ್ಟು ಪ್ರೇರಣೆ ನಿಮ್ಮ ಕೈಹಿಡಿದು ಮುನ್ನಡೆಸುವಲ್ಲಿ ಎರಡು ಮಾತಿಲ್ಲ.

ಪ್ರೇರಣೆ ಮಾನಸಿಕ ಬಲ. ನೀವು ಅಂದುಕೊಳ್ಳಬಹುದು, ನನ್ನ  ತಾಯಿ, ತಂದೆ, ಸ್ನೇಹಿತ ಅಥವಾ ಸ್ನೇಹಿತೆ ಹಾಗು ಮತ್ತಿತರರು ನನಗೆ ಪ್ರೇರಣೆ ಎಂದು. ಆದರೆ ಅದು ತಪ್ಪು ತಿಳುವಳಿಕೆ ಯಾಕಂದ್ರೆ, ಅದು ಪ್ರೇರಣೆ ಅಲ್ಲ ಸ್ಪೂರ್ತಿ.  ನಿಮ್ಮ ತಂದೆ, ತಾಯಿ, ಬಂಧು ಬಳಗ ನಿಮಗೆ ಸ್ಪೂರ್ತಿಯನ್ನ ತಂದು ಕೊಡುತ್ತಾರೆ. ಅದರಿಂದ ನಿಮ್ಮಲ್ಲಿ ಪ್ರೇರಣೆ ಉಂಟಾಗುತ್ತದೆ, ಹೀಗಾಗಿಯೇ, ಸ್ಪೂರ್ತಿ ಪ್ರೇರಣೆ ಎರಡು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮನ್ನ ನಾವು, ಮಾನಸಿಕವಾಗಿ  ಪ್ರೇರೇಪಿಸಿಕೊಳ್ಳ ಬೇಕು, ಆ ಪ್ರೇರಣೆಯೇ ನಮ್ಮ ಸಾಧನೆಯ ಹಾದಿಯನ್ನ ನಮಗೆ ಪರಿಚಯಿಸುತ್ತದೆ. ಒಮ್ಮೆಲೆ ನಮ್ಮ ಸೋಮಾರಿತನ ಅತಿಯಾಗಿ, ಪ್ರೇರಣೆ ಹಾಗು ಸೋಮಾರಿತನದ  ವಾಗ್ವಾದದಲ್ಲಿ  ಸೋಮಾರಿತನದ ಕೈ ಮುಂದೆ ಎಂದಾದಲ್ಲಿ, ನಮ್ಮ ಜೀವನವಿಡೀ, ನಾವು ಸೋಮಾರಿತನದ ಅಡಿಯಾಳಾಗಿ ನೊಂದು ಜೀವನ ಸಾಗಿಸಬೇಕಾಗುತ್ತದೆ. ಬದಲಾಗಿ ನಮ್ಮ ಜೀವನ ನಮ್ಮ ನಿರ್ಧಾರ ಉತ್ತಮ ಅಷ್ಟೇ ಅಲ್ಲದೆ ಅತ್ಯುತ್ತಮವಾಗಿ ಇರಬೇಕು ಅನ್ನೋದಾದ್ರೆ, ನಾವು, ಪ್ರೇರೇಪಿತರಾಗಬೇಕು. ಸಾವಿರಾರು, ಲಕ್ಷಾಂತರ ಜನರಿಗೆ ನಾವು ಮಾದರಿಯಾಗಬೇಕು. ನಮ್ಮನ್ನ ನೋಡಿ, ಛೇ … ಥು ….. ಎಂದು ಕಡೆಯಾಗಿ ಕಾಣುತ್ತಿದ್ದ ಜನಗಳ ಮುಂದೆ ನಾವು ಯಾರಿಗೂ ಕಮ್ಮಿ ಇಲ್ಲ ಎಂದು ಸಾಕ್ಷಿ ಸಮೇತರಾಗಿ ಯಶ್ಶಸ್ಸಿನ ಉತ್ತುಂಗದಲ್ಲಿ ನಿಂತು ಸಾಬೀತು ಪಡಿಸಬೇಕು.
 
ಕಾರ್ಯಸಿದ್ಧಿಗೆ ಹಣವೊಂದಿದ್ದರೆ ಸಾಲದು, ಹಣದ ಜೊತೆಗೆ ಗುಣ, ಗುಣದ ಜೊತೆಗೆ ಪ್ರೇರಣಾ ಬಹಳ ಮುಖ್ಯ. ಪ್ರೇರಣಾ ಅಂದರೆ ಪಕ್ಕದ ಮನೆಯಲ್ಲಿರುವ ಹುಡುಗಿನಾ? ಅಂತ ಕೇಳ್ಬಿಡ್ಬೇಡಿ….
ಪ್ರತಿ ಕೆಲಸದಲ್ಲೂ ಪ್ರೇರಣೆ ಇರಬೇಕು ಅನ್ನೋದಾದ್ರೆ ಮೊದಲು ನಮ್ಮ ಮನಸ್ಸು ನಮ್ಮ ನಿಗ್ರಹದಲ್ಲಿ ಇರಬೇಕು, ಏಕಾಗ್ರತೆ ಬಹಳ ಮುಖ್ಯ, ಚಂಚಲತೆಯನ್ನ ದೂರ ತಳ್ಬೇಕು,ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮ ಮನಸ್ಸು ನಮ್ಮ ಹತೋಟಿಯಲ್ಲಿ ಇರಬೇಕು, ನಮ್ಮ ಗುರಿ ನಮ್ಮನ್ನ  ಪ್ರತಿ ದಿನ, ಪ್ರತಿ ಕ್ಷಣ ಬಡಿದು ಎಬ್ಬಿಸಬೇಕು. ಹೀಗೆ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.

ನಿಮ್ಮ ಮುದ್ದಾದ ಮೊಗದಲ್ಲಿ, ನಗು ಎಂಬ ಕಾಂತಿ ಮೂಡೋದು ನಿಮ್ಮ ಗೆಲುವಿನಿಂದ. ಆದರೆ ಆ ಗೆಲುವು ಸಾಧ್ಯವಾಗೋದು, ಆತ್ಮವಿಶ್ವಾಸದಿಂದ, ಆತ್ಮವಿಶ್ವಾಸ ಮೂಡೋದು ನಿಮ್ಮಲ್ಲಿ ಪ್ರೇರಣೆ ಇದ್ದಾಗ ಮಾತ್ರ.  ಕಾರ್ಯಸಿದ್ಧಿ ಮಾಡಿಸೋ ಅಂತ ಕಾರ್ಯಸಿದ್ಧಿ ಆಂಜನೇಯನಿಗೋ, ಗಣೇಶನಿಗೋ ತೆಂಗಿನಕಾಯಿ  ಹೊಡೆದು, ಕರ್ಪೂರ ಬೆಳಗಿ ಪೂಜೆ ಮಾಡೋದ್ರಿಂದ ಕಾರ್ಯ ಸಿದ್ದಿ ಆಗಲ್ಲ, ದೃಢನಿರ್ಧಾರ ಬೇಕು, ಇದ್ದಕ್ಕೆ ಪ್ರೇರಣೆ  ಬೇಕೇ ಬೇಕು.

ಎಲ್ಲ ಯಶಸ್ವೀ ವ್ಯಕ್ತಿಗಳಿಗೆ ಸ್ಪೂರ್ತಿಯ ಚಿಲುಮೆ ಪ್ರೇರಣಾ. ಸ್ವಾಮಿ ವಿವೇಕಾನಂದರು ಹೇಳುತ್ತಾರೆ – “ಯಾರ ಮಾತಿಗೂ ನೀನು ಅಂಜಬೇಡ, ಯಾರ ಆಸೆಯೆಂತೆಯೂ ನೀನು ಇರಬೇಡ, ಯಾರನ್ನು ನಂಬಿ ನೀನು ಬದುಕ ಬೇಡ, ನಿನ್ನ ಜೀವನ ನಿನಗೆ ಮರೆಯಬೇಡ”. ಅದೆಂಥ ಅದ್ಭುತ ನುಡಿಗಳು, ಇದನ್ನ, ಕಾರ್ಯಸಾಧಿಸಲು, ಪ್ರೇರಣೆಯೇ ಮಾರ್ಗಸೂಚಿ, ಸಾದಿಸಿದ ನಂತರ ನೀನಾಗುವೆ ಮತ್ತಿತರರಿಗೆ ದಿಕ್ಸೂಚಿ, ಇಲ್ಲದಿದ್ದಲ್ಲಿ, ನಿನ್ನ ಬಾಳನ್ನು ನೀನೆ ಕೊಲ್ಲುವೆ ಚುಚ್ಚಿ ಚುಚ್ಚಿ….

“ಪ್ರೇರಣೆ ಎಂಬ ಧೋರಣೆ ಇರಲಿ ಯಶಸ್ಸಿನ ಹಾದಿ ನಿಮ್ಮದಾಗಲಿ”

Ad Widget

Related Posts

error: Content is protected !!
Scroll to Top