Kannada CADD Nest Private Limited

ಟೆಲಿಫೋನ್‌ ಇಂಟರ್‌ವ್ಯೂಗೆ ಸಿದ್ಧತೆ ನಡೆಸುವುದು ಹೇಗೆ?

ಟೆಲಿಫೋನ್‌ ಇಂಟರ್‌ವ್ಯೂಗೆ ಸಿದ್ಧತೆ ನಡೆಸುವುದು ಹೇಗೆ?

ಕೋವಿಡ್‌ ೧೯ನಿಂದಾಗಿ ಉದ್ಯೋಗ ಸಂದರ್ಶನಗಳು ಹೆಚ್ಚಾಗಿ ಟೆಲಿಫೋನ್‌ ಅಥವಾ ವಿಡಿಯೋ ಮೂಲಕ ನಡೆಯುತ್ತವೆ. ವಿದ್ಯಾರ್ಥಿಗಳಿಗೆ ಭವಿಷ್ಯದ ಕೋರ್ಸ್‌ ಆಯ್ಕೆ, ಕಾಲೇಜು ಆಯ್ಕೆ, ಅಡ್ಮಿಷನ್‌ ಪ್ರಕ್ರಿಯೆಗಳೂ ಟೆಲಿಫೋನ್‌ ಮೂಲಕವೇ ಹೆಚ್ಚಾಗಿ ನಡೆಯಲಿದೆ. ವಿವಿಧ ಆನ್‌ಲೈನ್‌ ಕೊರ್ಸ್ ಗಳು ಈಗ ಜನಪ್ರಿಯವಾಗುತ್ತಿವೆ. ಕ್ಯಾಡ್‌ನೆಸ್ಟ್‌‌ ಈಗಾಗಲೇ ವಿವಿಧ ಕೋರ್ಸ್‌ ಗಳನ್ನು ಆನ್‌ಲೈನ್‌ ಮೂಲಕವೇ ನೀಡುತ್ತಿದೆ. ಜಗತ್ತು ಹೀಗೆ ವರ್ಚ್ಯುವಲ್‌ ಆಗುತ್ತಿರುವಾಗ ನೀವು ಅದಕ್ಕೆ ತಕ್ಕಂತೆ ಸಿದ್ಧತೆ ನಡೆಸಬೇಕಾಗುತ್ತದೆ.

ಉದಾಹರಣೆಗೆ ನಿಮಗೆ ನಾಳೆ ಒಂದು ಟೆಲಿಫೋನ್‌ ಇಂಟರ್‌ವ್ಯೂ ಇದೆ ಎಂದಿಟ್ಟುಕೊಳ್ಳಿ. ಫೋನ್‌ನಲ್ಲಿ ಏನು ಬೇಕಾದರೂ ಮಾತನಾಡಿದಾಯ್ತು ಎಂದುಕೊಳ್ಳಬೇಡಿ. ಟೆಲಿಫೋನ್‌ ಸಂದರ್ಶನಕ್ಕೂ ನೇರ ಸಂದರ್ಶನದಷ್ಟೇ ಗಮನ ನೀಡಿ.

ಯಾಕೆ ಟೆಲಿಫೋನ್‌ ಇಂಟರ್‌ವ್ಯೂ?

  • ಈಗ ಕಂಪನಿಗಳಿಗೆ ಉದ್ಯೋಗಿಗಳ ಅವಶ್ಯಕತೆ ಇರುತ್ತದೆ. ಉದಾಹರಣೆಗೆ, ಈ ಕೊರೊನಾ ಕಾಲದಲ್ಲಿ ನೇರ ಸಂದರ್ಶನಕ್ಕೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಕ್ಯಾಡ್‌ನೆಸ್ಟ್‌‌ ಕಚೇರಿಗೋ, ಮಲ್ಲೇಶ್ವರಂ ಕ್ಯಾಡ್‌ನೆಸ್ಟ್‌‌ ಕಚೇರಿಗೋ ಸಂದರ್ಶನಕ್ಕೆ ಬರಲು ಹೇಳುವುದು ಕಷ್ಟ. ಇದಕ್ಕಾಗಿ ಕ್ಯಾಡ್‌ನೆಸ್ಟ್‌‌ ಮುಖ್ಯಸ್ಥರು ನಿಮಗೆ ಟೆಲಿಫೋನ್‌ ಇಂಟರ್‌ವ್ಯೂ ಏರ್ಪಡಿಸಬಹುದು.
  • ಕೆಲವೊಮ್ಮೆ ಕಂಪನಿಯ ಪ್ರಧಾನ ಕಚೇರಿ ಬೇರೆ ರಾಜ್ಯ/ದೇಶದಲ್ಲಿರಬಹುದು. ಆಯಾ ಪ್ರಾಂತ್ಯದಲ್ಲಿ ಅವಶ್ಯಕತೆ ಇರುವ ಉದ್ಯೋಗಿಗಳನ್ನು ಟೆಲಿಫೋನ್‌ ಮೂಲಕ ಮಾತನಾಡುವ ಅವಶ್ಯಕತೆ ಬೀಳಬಹುದು.

ದೂರವಾಣಿ ಸಂದರ್ಶನಕ್ಕೆ ಸಿದ್ಧತೆ ಹೇಗಿರಬೇಕು?


ಫೋನ್‌ನಲ್ಲಿ ಮಾತನಾಡುವುದು ನಿಮ್ಮ ಆಪ್ತರಲ್ಲ. ನಿಮಗೆ ಉದ್ಯೋಗ ನೀಡುವ ಉದ್ಯೋಗದಾತರು. ಫೋನ್‌ ಸಂದರ್ಶನ ಸರಳವಾಗಿಯೇನೂ ಇರುವುದಿಲ್ಲ. ಸಂದರ್ಶನಕ್ಕೆ ಮೊದಲು ಅಭ್ಯರ್ಥಿಗಳು ಸಾಕಷ್ಟು ಸಿದ್ಧತೆ ನಡೆಸಬೇಕು.

ಉದ್ಯೋಗದಾತ ಕಂಪನಿಯ ಕುರಿತು ಅಧ್ಯಯನ ನಡೆಸಿ

ಯಾವುದೇ ಉದ್ಯೋಗ ಸಂದರ್ಶನ ಎದುರಿಸುವ ಮೊದಲು ಆ ಕಂಪನಿಯ ಬಗ್ಗೆ ಅಧ್ಯಯನ ನಡೆಸಿ. ಉದಾಹರಣೆಗೆ ನಿಮಗೆ ಕನ್ನಡ ಕ್ಯಾಡ್‌ನೆಸ್ಟ್‌‌ ಬಗ್ಗೆ ವಿವರ ಬೇಕಿದ್ದರೆ ಸಂಪೂರ್ಣ ವಿವರ ಈ ಪುಟದಲ್ಲಿ ದೊರಕುತ್ತದೆ. ನೇರ ಸಂದರ್ಶನಕ್ಕೆ ಸಿದ್ಧರಾಗುವಂತೆ ನೀವು ಕಂಪನಿಯ ಕುರಿತು ಒಂದಿಷ್ಟು ಮಾಹಿತಿಯನ್ನು ಮೊದಲೇ ತಿಳಿದುಕೊಂಡಿರಿ. ಕಂಪನಿಯ ವಿಷನ್ ಮತ್ತು ಮಿಷನ್, ವ್ಯವಹಾರ, ಸಾಧನೆ ಇತ್ಯಾದಿಗಳ ಮಾಹಿತಿ ತಿಳಿದಿರಲಿ. ಇಂತಹ ಮಾಹಿತಿಗಳನ್ನು ಆಯಾ ಕಂಪನಿಯ ಅಬೌಟ್‌ ಅಸ್‌ ಪುಟದಲ್ಲಿ ಪಡೆಯಬಹುದು.

ರೆಸ್ಯೂಂ ಅಥವಾ ಸಿವಿ ಜೊತೆಗೆ ಇಟ್ಟುಕೊಳ್ಳಿ

ಉದ್ಯೋಗದಾತರಿಗೆ ನೀವು ಅಪರಿಚಿತ ವ್ಯಕ್ತಿ. ಅವರು ನಿಮ್ಮ ರೆಸ್ಯೂಂ ಮೇಲೆ ಕಣ್ಣಾಡಿಸಿಕೊಂಡು ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವೊಮ್ಮೆ ರೆಸ್ಯೂಂನಲ್ಲಿ ಏನು ಬರೆದಿರುವಿರಿ ಎಂದು ನಿಮಗೇ ಮರೆತು ಹೋಗಬಹುದು. ನಿಮ್ಮಲ್ಲಿ ಸಂದರ್ಶಕರು ಹೆಚ್ಚಿನ ವಿವರಣೆ ಕೇಳಿದಾಗ ಉತ್ತರಿಸಲು ಅನುಕೂಲವಾಗುವಂತೆ ಸಂದರ್ಶನದ ಸಮಯದಲ್ಲಿ ರೆಸ್ಯೂಂ ಪಕ್ಕದಲ್ಲಿಟ್ಟುಕೊಳ್ಳಿ. ರೆಸ್ಯೂಂ ನೋಡಿಕೊಂಡು ಉತ್ತರ ನೀಡುವುದು ನಿಮಗೂ ಸುಲಭವಾಗಬಹುದು.

ನೋಟ್‌ಪ್ಯಾಡ್‌ ಇಟ್ಟುಕೊಳ್ಳಿ

ಉದ್ಯೋಗದಾತರು ಏನೂ ಹೇಳಿದರೂ ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯ ನಿಮಗೆ ಇದೆಯೆಂದು ಬೀಗಬೇಡಿ. ಟೆಲಿಫೋನ್‌ ಸಂದರ್ಶನದಲ್ಲಿ ಉದ್ಯೋಗದಾತರು ನೀಡುವ ಕೆಲವೊಂದು ಮಾಹಿತಿಯನ್ನು ಬರೆದಿಟ್ಟುಕೊಳ್ಳುವ ಅವಶ್ಯಕತೆ ಬೀಳಬಹುದು. ಇಮೇಲ್‌ ವಿಳಾಸ, ದೂರವಾಣಿ ಸಂಖ್ಯೆ, ಯಾರಾದರೂ ವ್ಯಕ್ತಿಯ ವಿವರವನ್ನು ತಕ್ಷಣ ಬರೆದಿಟ್ಟುಕೊಳ್ಳಬೇಕಾಗಬಹುದು. ಸಂದರ್ಶಕರು ಹೇಳಿದ ಬಳಿಕ ನೋಟ್‌ಪ್ಯಾಡ್‌, ಪೆನ್ನು ಹುಡುಕುತ್ತ ಸಮಯ ವ್ಯರ್ಥ ಮಾಡದಿರಿ.

ನಿಮ್ಮ ಸಾಧನೆಗಳು ನಿಮಗೆ ನೆನಪಿರಲಿ

ನೀವು ಕಾಲೇಜಿನಲ್ಲಿರುವಾಗ ಏನಾದರೂ ಸಾಧನೆ ಮಾಡಿರಬಹುದು. ಈ ಹಿಂದಿನ ಉದ್ಯೋಗದಲ್ಲಿ ಕಂಪನಿಯ ಆದಾಯ ವೃದ್ಧಿಗೊಳಿಸಲು ಏನಾದರೂ ವಿಶೇಷ ಕೊಡುಗೆ ನೀಡಬಹುದು. ನಿಮ್ಮಲ್ಲಿ ವಿಶೇಷ ಸಾಮರ್ಥ್ಯ ಅಥವಾ ದೌರ್ಬಲ್ಯಗಳು ಇರಬಹುದು. ಈ ಕುರಿತು ಸಂದರ್ಶಕರು ಪ್ರಶ್ನೆ ಕೇಳಿದಾಗ ಬಾಯಿಗೆ ತೋಚಿದ್ದನ್ನು ಹೇಳುವ ಬದಲು ಅತ್ಯುತ್ತಮವಾಗಿ ಉತ್ತರಿಸಿ. ಇಂತಹ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕೆಂದು ಮೊದಲೇ ಸಿದ್ಧತೆ ನಡೆಸಿರಿ.

ಮಾತನಾಡುವ ಸ್ಥಳ ಕೂಲ್‌ ಆಗಿರಲಿ

ಟೆಲಿಫೋನ್‌ ಇಂಟರ್‌ವ್ಯೂಗೆ ಸಮಯ ನಿಗದಿಯಾಗಿದ್ದರೂ ಬಸ್‌ನಲ್ಲಿ, ಬೈಕ್‌ನಲ್ಲಿ ಸಂಚರಿಸುತ್ತ ಮಾತನಾಡಬೇಡಿ. ಸಂದರ್ಶಕರು ಸಂದರ್ಶನಕ್ಕೆ ಸಮಯ ನಿಗದಿಪಡಿಸಿದ ಸಮಯದಲ್ಲಿ ಆದಷ್ಟು ನಿಶ್ಯಬ್ದವಾಗಿರುವ ಸ್ಥಳವನ್ನು ಆಯ್ಕೆಮಾಡಿಕೊಳ್ಳಿ. ಮನೆಯ ಇತರೆ ಸದಸ್ಯರಿಗೆ ಆ ಸಮಯದಲ್ಲಿ ನಿಶ್ಯಬ್ಧವಾಗಿರುವಂತೆ ತಿಳಿಸಿ. ಮನೆಯೊಳಗೆ ಕಷ್ಟವಾದರೆ ಬೇರೆ ಯಾವುದಾದರೂ ಪ್ರಶಾಂತವಾದ ಸ್ಥಳದಲ್ಲಿ ಹೋಗಿ ಕುಳಿತುಕೊಳ್ಳಿ.

ಹಾಸಿಗೆಯ ಮೇಲೆ ಬಿದ್ದುಕೊಂಡು ಮಾತನಾಡಬೇಡಿ

ಹಾಸಿಗೆಯ ಮೇಲೋ, ಸೋಪದ ಮೇಲೋ ಬಿದ್ದುಕೊಂಡು ಆರಾಮವಾಗಿ ಮಾತನಾಡಲು ನೀವು ಮಾತನಾಡುವುದು ನಿಮ್ಮ ಪ್ರಿಯತಮ/ಪ್ರಿಯತಮೆ ಬಳಿ ಅಲ್ಲ. ಎದುರಿನಲ್ಲಿ ಸಂದರ್ಶಕರು ಕುಳಿತಿದ್ದಾರೆ ಎಂದುಕೊಂಡು ಶಿಸ್ತಾಗಿ ಕುಳಿತು ಅಥವಾ ನಿಂತು ಮಾತನಾಡಿ. ಮಾತನಾಡುವಾಗ ಶಿಸ್ತು ಇರಲಿ, ಸಿಗರೇಟು ಸೇದುತ್ತ, ಚೂಯಿಂಗ್‌ಗಮ್‌ ಜಗಿಯುತ್ತ ಮಾತನಾಡಬೇಡಿ.

ಧ್ವನಿಯ ಏರಿಳಿತ ಗಮನಿಸಿ

ಟೆಲಿಫೋನ್‌ ಸಂದರ್ಶನವಾಗಿರುವ ಕಾರಣ ಉದ್ಯೋಗದಾತರು ನಿಮ್ಮನ್ನು ಮುಖತಃ ಭೇಟಿಯಾಗಿರುವುದಿಲ್ಲ. ನೀವು ನಿಮ್ಮ ಧ್ವನಿಯ ಮೂಲಕವೇ ನಿಮ್ಮ ವ್ಯಕ್ತಿತ್ವವನ್ನು ಅವರಿಗೆ ತಿಳಿಸಬೇಕಾಗುತ್ತದೆ. ಧ್ವನಿಯ ಮೂಲಕವೇ ಅವರಿಗೆ ಭರವಸೆ ಹುಟ್ಟಿಸಬೇಕು. ಹಿಗಾಗಿ ದೃಢತೆ ಮತ್ತು ವಿನಮ್ರತೆಯ ಧ್ವನಿಯಲ್ಲಿ ಮಾತನಾಡಿ.

ಕುಡಿಯಲು ನೀರು ಇರಲಿ

ಟೆಲಿಫೋನ್‌ ಸಂದರ್ಶನ ಎಷ್ಟು ಹೊತ್ತು ನಡೆಯುತ್ತದೆ ಎನ್ನುವ ಕುರಿತು ಸ್ಪಷ್ಟತೆ ಇರುವುದಿಲ್ಲ. ಕೆಲವೇ ನಿಮಿಷಗಳಲ್ಲಿ ಸಂದರ್ಶನ ಮುಗಿಯಬಹುದು. ಗಂಟೆಗಟ್ಟಲೆ ಸಂದರ್ಶನವೂ ನಡೆಯಬಹುದು. ಹೀಗಾಗಿ, ಮಾತನಾಡಿ ಬಾಯಾರಿದರೆ ಕುಡಿಯಲು ಹತ್ತಿರದಲ್ಲಿ ನೀರಿನ ಬಾಟಲಿ ಇಟ್ಟುಕೊಳ್ಳಿ.

ಹೆಚ್ಚು ಸಮಯ ತೆಗೆದುಕೊಳ್ಳಬೇಡಿ

ಥಟ್‌ ಅಂತ ಹೇಳಿ ಪ್ರೋಗ್ರಾಮ್‌ನಲ್ಲಿರುವಂತೆ ನೀವು ಸಂದರ್ಶಕರ ಪ್ರಶ್ನೆಗೆ ತಕ್ಷಣ ಉತ್ತರ ನೀಡಬೇಕಿಲ್ಲ. ಹಾಗಂತ ಉತ್ತರ ನೀಡಲು ತುಂಬಾ ಸಮಯವನ್ನೂ ತೆಗೆದುಕೊಳ್ಳಬೇಡಿ. ನಿಧಾನವಾಗಿ ಮಾತನಾಡಿ, ತುಂಬಾ ವೇಗವಾಗಿ ಮಾತನಾಡಿದರೆ ಸಂದರ್ಶಕರಿಗೆ ನೀವು ಹೇಳುವುದು ಅರ್ಥವಾಗದೆ ಹೋಗಬಹುದು.

ನಗುಮುಖದಿಂದ ಮಾತನಾಡಿ

ಇದೇನು, ಫೋನ್‌ನಲ್ಲಿ ಮಾತನಾಡಿದಾಗ ನಗು ಕಾಣುತ್ತ? ಎಂದು ಪ್ರಶ್ನಿಸದಿರಿ. ಆದರೆ, ಮುಖದಲ್ಲಿ ನಗುವಿದ್ದರೆ ಮಾತಿನಲ್ಲಿ ಉತ್ಸಾಹ, ಉಲ್ಲಾಸ ಇರುತ್ತದೆ. ಸಂದರ್ಶಕರಿಗೆ ನಿಮ್ಮ ಮಾತು ಆಪ್ತವಾಗುತ್ತದೆ.

ನೀವೂ ಪ್ರಶ್ನೆಗಳನ್ನು ಕೇಳಿರಿ

ಟೆಲಿಫೋನ್‌ ಸಂದರ್ಶನವೆಂದರೆ ಕೇವಲ ಸಂದರ್ಶಕರ ಪ್ರಶ್ನೆಗೆ ಉತ್ತರಿಸುವುದು ಮಾತ್ರವಲ್ಲ. ಸಂದರ್ಶಕರಲ್ಲಿ ನೀವೂ ಪ್ರಶ್ನೆಗಳನ್ನು ಕೇಳಬಹುದು. ಸಂದರ್ಶನವೆನ್ನುವುದು ಉತ್ತಮ ಚರ್ಚೆಯಂತೆ ನಡೆದರೆ ಹೆಚ್ಚು ಅರ್ಥಪೂರ್ಣವಾಗುತ್ತದೆ.

ಫೋನ್‌ ಸಂದರ್ಶನ ಆರಂಭವಾದಗ ಹಾಯ್‌ ಸರ್‌, ಹಾಯ್‌ ಮೇಡಂ, ಸಂದರ್ಶನ ಮುಗಿದಾಗ ಧನ್ಯವಾದ ಹೇಳಲು ಮರೆಯದಿರಿ.

ಕನ್ನಡ ಕ್ಯಾಡ್‌ನೆಸ್ಟ್‌ ನಲ್ಲಿ ನಿಮ್ಮಕರಿಯರ್‌ಗೆ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸಲಹೆಗಳು, ಮಾಹಿತಿಗಳು ಸಾಕಷ್ಟು ಇವೆ. ಇಲ್ಲಿರುವ ಮಾಹಿತಿಗಳನ್ನು ನೀವು ಓದಿ. ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯದಿರಿ. ನಿಮ್ಮ ಸಲಹೆ, ಸೂಚನೆಗಳಿಗೆ ಸದಾ ಸ್ವಾಗತ.

ನೆನಪಿಡಿ, ಕೊರೊನಾ ಬಳಿಕದ ಜಗತ್ತಿನಲ್ಲಿ ಸಾಕಷ್ಟು ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ನಿರುದ್ಯೋಗ ಹೆಚ್ಚಲಿದೆ. ಇಂತಹ ಸಮಯದಲ್ಲಿ ಸರಿಯಾದ ಕೌಶಲ ಇದ್ದವರೂ ಮಾತ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಕಾಶ ಪಡೆಯಬಹುದು. ಇದಕ್ಕಾಗಿ ನೀವು ಸಮಯ ವ್ಯರ್ಥ ಮಾಡದೆ ಹೊಸ ಕೌಶಲಗಳನ್ನು, ಸರ್ಟಿಫಿಕೇಷನ್‌ ಕೊರ್ಸ್‌ಗಳನ್ನು ಪಡೆದುಕೊಳ್ಳಿ.

Related Posts

error: Content is protected !!
Scroll to Top