ಫೇಸ್ಬುಕ್ ಮಾಲಿಕತ್ವದ ವಾಟ್ಸಪ್ ಈಗ ಹೊಸ ದಿಕ್ಕಿಗೆ ತನ್ನ ಕಣ್ಣನ್ನು ನೆಟ್ಟಿದೆ.ಈಗಾಗಲೇ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಸಾಮ್ರಾಜ್ಯದಲ್ಲಿರುವ ಭಾರತದ ಯುಪಿಐ ಸಾಮ್ರಾಜ್ಯದಲ್ಲಿ ತನ್ನ ಬಾವುಟವನ್ನೂ ನೆಡಲು ಮುಂದಾಗಿದೆ. ಈಗಾಗಲೇ ಫೇಸ್ಬುಕ್ ಪೇಮೆಂಟ್ ಫೀಚರ್ ಲಭ್ಯವಿದ್ದು, ಕ್ಯಾಡ್ನೆಸ್ಟ್ ವಿದ್ಯಾರ್ಥಿಗಳು ಕೂಡ ಇದೇ ಫೀಚರ್ ಬಳಸಿ ಕಲಿಕಾ ಶುಲ್ಕ ಪಾವತಿಸುತ್ತಿರುವುದು ವಿಶೇಷ.
ಆದರೂ, ಒಂದಿಷ್ಟು ಮಂದಿಗೆ ಇನ್ನೂ ವಾಟ್ಸಪ್ ಪೇಮೆಂಟ್ ಕುರಿತು ಅರಿವಿಲ್ಲ. ಇನ್ನು ಕೆಲವರು ಈಗಾಗಲೇ ಫೋನ್ಪೇ, ಗೂಗಲ್ ಪೇ ಇದೆಯಲ್ವ? ಇನ್ಯಾಕೆ ವಾಟ್ಸಪ್ ಪೇ ಎಂದುಕೊಂಡು ಸುಮ್ಮನಿದ್ದಾರೆ. ಸಂತೋಷ, ಅವರವರ ಪಾವತಿ ವಿಧಾನ ಅವರವರಿಗೆ. ವಾಟ್ಸಪ್ ಪೇಮೆಂಟ್ ವಿಧಾನ ಬಳಸಲು ಬಯಸುವ ವಿದ್ಯಾರ್ಥಿಗಳಿಗಾಗಿ ಈ ಲೇಖನ. ಉಳಿದವರೂ ಈ ಸುದ್ದಿ ಓದಬಹುದು. ಅಥವಾ ಕನ್ನಡ ಕ್ಯಾಡ್ನೆಸ್ಟ್ನಲ್ಲಿ ಬರೆದಿರುವ ಇತರೆ ಉಪಯುಕ್ತ ಟಿಪ್ಸ್ಗಳನ್ನು ಓದಬಹುದು.
ಈಗಾಗಲೇ WhatsApp Pay ಭಾರತದಲ್ಲಿ ಲೈವ್ ಆಗಿದ್ದು, ಆಸಕ್ತರು ತಮ್ಮ ವಾಟ್ಸಪ್ ಅಪ್ಡೇಟ್ ಮಾಡಿಕೊಂಡು ಈ ಫೀಚರ್ ಬಳಸಬಹುದು. ವಿಶೇಷವೆಂದರೆ ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಯುಪಿಐಗಳೂ ವಾಟ್ಸಪ್ ಪೇಮೆಂಟ್ಗೆ ಬೆಂಬಲ ನೀಡುತ್ತಿವೆ. ಹೀಗಾಗಿ, ವಾಟ್ಸಪ್ನ ನೂತನ ಫೀಚರ್ ಪೇಟಿಎಂ, ಗೂಗಲ್ ಪೇ ಮತ್ತು ಫೋನ್ ಪೇ ಇತ್ಯಾದಿ ಕಂಪನಿಗಳಿಗೆ ನಡುಕ ಉಂಟು ಮಾಡಿರುವುದು ಸುಳ್ಳಲ್ಲ.
WhatsApp Pay ಮೂಲಕ ಬಳಕೆದಾರರು ವಾಟ್ಸಪ್ ಸಂದೇಶ ಕಳುಹಿಸಿದಷ್ಟು ಸರಳವಾಗಿ ಇನ್ನೊಬ್ಬರಿಗೆ ಪಾವತಿ ಮಾಡಬಹುದು. ಹಾಗಂತ, ಸುರಕ್ಷತೆ ವಿಷಯ ಕಡೆಗಣಿಸಿದೆ ಎಂದುಕೊಳ್ಳಬೇಡಿ. ಪಿ೨ಪಿ ಪೇಮೆಂಟ್ ಫೀಚರ್ನಿಂದ ಬಳಕೆದಾರರಿಗೆ ಅನನ್ಯ ಸೆಕ್ಯುರಿಟಿ ಮತ್ತು ಪ್ರೈವೇಸಿ ನೀಡುವುದಾಗಿ ಕಂಪನಿ ಹೇಳಿದೆ. ಪ್ರತಿಯೊಂದು ಪಾವತಿಗೂ ಯುಪಿಐ ಪಿನ್ ನೀಡುವುದು ಕಡ್ಡಾಯ. ನೀವು ಇತರರ ಜೊತೆ ಪಿನ್ ಷೇರ್ ಮಾಡದೆ ಇದ್ದರೆ ಸೇಫ್ಟಿ ಕುರಿತು ಚಿಂತಿಸಬೇಕಿಲ್ಲ.
ಆಂಡ್ರಾಯ್ಡ್ ಫೋನ್ನಲ್ಲಿ ವಾಟ್ಸಪ್ ಪೇಮೆಂಟ್ಗೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡುವುದು ಹೇಗೆ?
- ವಾಟ್ಸಪ್ ತೆರೆದು ಮೂರು ಚುಕ್ಕಿ ಇರುವ ಆಯ್ಕೆಯಲ್ಲಿ ಮೋರ್ ಆಪ್ಷನ್ ಕ್ಲಿಕ್ ಮಾಡಿ.
- ಸೆಟ್ಟಿಂಗ್ ಆಯ್ಕೆ ಮಾಡಿ.ಅಲ್ಲಿ ಪೇಮೆಂಟ್ ಎಂಬ ಆಯ್ಕೆ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿ ಆಡ್ ನ್ಯೂ ಅಕೌಂಟ್ ಕ್ಲಿಕ್ ಮಾಡಿ.
- ಆಸೆಪ್ಟ್ ಆಂಡ್ ಕಂಟಿನ್ಯೂ ಕ್ಲಿಕ್ ಮಾಡಿ. ಈ ಮೂಲಕ ವಾಟ್ಸಪ್ ಪೇಮೆಂಟ್ನ ನಿಬಂಧನೆಗಳು ಮತ್ತು ಪ್ರೈವೇಸಿ ಪಾಲಿಸಿಗೆ ನೀವು ಅನುಮತಿ ನೀಡುವಿರಿ. ಪ್ರೈವೇಸಿ ಪಾಲಿಸಿ ಓದುವ ಅಭ್ಯಾಸ ಇದ್ದರೆ ಒಳ್ಳೆಯದು.
- ನಿಮ್ಮ ಬ್ಯಾಂಕ್ ಹೆಸರನ್ನು ಆಯ್ಕೆ ಮಾಡಿ. ಅಲ್ಲಿ ಒಂದಿಷ್ಟು ಬ್ಯಾಂಕ್ಗಳ ಲಿಸ್ಟ್ ಇರುತ್ತವೆ. ಅದರಲ್ಲಿ ನಿಮ್ಮ ಬ್ಯಾಂಕ್ ಆಯ್ಕೆ ಮಾಡಿ.
- ಎಸ್ಎಂಎಸ್ ಮೂಲಕ ವೇರಿಫೈ ಮಾಡಲು ಅನುಮತಿ ನೀಡಿ.
- ವೇರಿಫೈ ಮಾಡಿದ ಬಳಿಕ ನೀವು ಹಣ ಸೆಂಡ್ ಮಾಡಬಹುದು ಅಥವಾ ರಿಸೀವ್ ಮಾಡಬಹುದು.
- ಐಫೋನ್ನಲ್ಲಿಯಾದರೆ ನೇರವಾಗಿ ಸೆಟ್ಟಿಂಗ್ ಕ್ಲಿಕ್ ಮಾಡಿ, ಪೇಮೆಂಟ್ ಕ್ಲಿಕ್ ಮಾಡಿ, ಆಡ್ ನ್ಯೂ ಅಕೌಂಟ್ ಕ್ಲಿಕ್ ಮಾಡಿ ಈ ಹಿಂದೆ ಆಂಡ್ರಾಯ್ಡ್ಗೆ ಹೇಳಿದಂತಹ ಸಲಹೆಗಳನ್ನು ಅನುಸರಿಸಿ.
ವಂಚಕರ ಕುರಿತು ಎಚ್ಚರವಿರಲಿ
ನೀವು ಫೋನ್ಪೇ, ಗೂಗಲ್ ಪೇ ಅಥವಾ ವಾಟ್ಸಪ್ ಪೇಮೆಂಟ್ ಇತ್ಯಾದಿ ಯುಪಿಐ ಆಧಾರಿತ ಪಾವತಿ ವ್ಯವಸ್ಥೆಯನ್ನು ಬಳಸುವುದಿದ್ದರೆ ಈ ಮುಂದಿನ ಸಲಹೆಗಳನ್ನು ಪಾಲಿಸಿ.
- ನಿಮಗೆ ಯಾರಾದರೂ ಕರೆ ಮಾಡಿ ಪಿನ್ ಕೇಳಿದರೆ ನೀಡಬೇಡಿ. ಯುಪಿಐ ಮೂಲಕ ಪಾವತಿಸುವುದು ತುಂಬಾ ಸುರಕ್ಷಿತ. ಆದರೆ, ನೀವು ಯಾರಿಗಾದರೂ ಪಿನ್ ಅಥವಾ ಟ್ರಾನ್ಸಕ್ಷನ್ ಪಾಸ್ವರ್ಡ್ ನೀಡದೆ ಇದ್ದರೆ ಮಾತ್ರ ಸುರಕ್ಷಿತವಾಗಿರುತ್ತದೆ.
- ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್ನಂತಹ ಅಧಿಕೃತ ಆಪ್ ಸ್ಟೋರ್ಗಳಿಂದ ಮಾತ್ರ ಇಂತಹ ಯುಪಿಐ ಆಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಇಮೇಲ್ ಅಥವಾ ವಂಚಕರು ಕಳುಹಿಸಿದ ಸಂದೇಶಗಳಲ್ಲಿ ಬಂದಿರುವ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ.
- ನಿಮ್ಮ ಬ್ಯಾಂಕಿಂಗ್ ಮೊಬೈಲ್ ಸಂಖ್ಯೆಯನ್ನು ಸಿಕ್ಕ ಸಿಕ್ಕ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ನಲ್ಲಿ ಬರೆಯದಿರುವುದು ಒಳ್ಳೆಯದು. ಆ ಸಂಖ್ಯೆಯ ಹೆಸರಲ್ಲಿ ಯಾರಾದರೂ ಆಪ್ ಲಾಗಿನ್ ಆಗುತ್ತಾರೆ. ನಂತರ ನಿಮಗೆ ಯಾವುದಾದರೂ ಬ್ಯಾಂಕ್ ಅಥವಾ ಬೇರೆ ಇನ್ಯಾವುದೋ ಮೋಸದ ಕರೆ ಮಾಡಿ ನಿಮ್ಮಿಂದ ಟ್ರಾನ್ಷಕ್ಸನ್ ಪಾಸ್ವರ್ಡ್ ಕೇಳಿ ನಿಮ್ಮ ಖಾತೆಯಲ್ಲಿರುವ ಹಣವನ್ನು ವರ್ಗಾಯಿಸಿಕೊಳ್ಳಬಹುದು. ಇಂತಹ ಘಟನೆಗಳು ಸಾಕಷ್ಟು ನಡೆದಿರುವುದು ನಿಮಗೂ ತಿಳಿದಿರಬಹುದು.
- ಬ್ಯಾಂಕ್ ಖಾತೆಗೆ ಲಿಂಕ್ ಆಗಿರದ ಮೊಬೈಲ್ ಸಂಖ್ಯೆಯನ್ನು ಕರೆ ಮಾಡಲು ಅಥವಾ ಇತರ ಉದ್ದೇಶಗಳಿಗೆ ಹೆಚ್ಚಾಗಿ ಬಳಸಿ.
- ಹಣ ಸ್ವೀಕರಿಸಲು ಯಾವುದೇ ಪಿನ್ ನಮೂದಿಸಬೇಕಾಗಿಲ್ಲ. ಹೀಗಾಗಿ, ನಿಮ್ಮ ಖಾತೆಗೆ ಹಣ ಹಾಕಿದ್ದೇವೆ. ಪಿನ್ ತಿಳಿಸಿ ಎಂದರೆ ನಂಬಬೇಡಿ. ಈ ರೀತಿ ಕರೆ ಬಂದರೂ ಪಿನ್ ನೀಡುವವರು ಇದ್ದಾರೆ.
ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ತಿಳಿಯಲು ಬಯಸಿದರೆ ಕ್ಯಾಡ್ನೆಸ್ಟ್ ಡಿಜಿಸ್ಕಿಲ್ ತಾಣಕ್ಕೆ ಭೇಟಿ ನೀಡಿ