ಅನಿಮೇಷನ್ ಸಿನಿಮಾಗಳ ಅಂತಾರಾಷ್ಟ್ರೀಯ ಸಂಘಟನೆಯಾದ “ದಿ ಅಸೋಸಿಯೇಷನ್ ಇಂಟರ್‌ನ್ಯಾಷನಲ್ ಫಿಲ್ಮ್ ಅನಿಮೇಷನ್ (ಎಎಸ್‌ಐಎಫ್‌ಎ) ಇಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಅನಿಮೇಷನ್ ದಿನವನ್ನು ಆಚರಿಸುತ್ತಿದೆ. ASIFAನ ಭಾರತದ ವಿಭಾಗವು ಭಾರತದ ಅತ್ಯುತ್ತಮ ಅನಿಮೇಷನ್ ಸಿನಿಮಾ ತಯಾರಕರನ್ನು ಗುರುತಿಸುವ ಸಲುವಾಗಿ ದೇಶದ ಅತ್ಯುತ್ತಮ ಕಿರುಚಿತ್ರಗಳನ್ನು ಆಯ್ಕೆ ಮಾಡಿದೆ.
ದೇಶದ ನೂರಾರು ಪ್ರತಿಭಾನ್ವಿತ ಅನಿಮೇಷನ್ ತಯಾರಕರು ತಯಾರಿಸಿದ ಫಿಲ್ಮ್‌ಗಳಲ್ಲಿ ರಾಜು ಆಂಡ್ ಐ (Raju & I) ಮತ್ತು ಧಕ್- ದಿ ಡ್ರಮ್ ಚಿತ್ರಗಳನ್ನು ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ASIFAನ ಭಾರತೀಯ ಚಾಪ್ಟರ್‌ನ ಅಧ್ಯಕ್ಷರಾದ ಕೆ. ಚಂದ್ರಶೇಕರ್ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.
ಬಹುಮಾನ ಪಡೆದ ರಾಜು ಆಂಡ್ ಐ ಚಿತ್ರವು ಬಾಲ ಕಾರ್ಮಿಕರ ಕುರಿತಾದ ಅರ್ಧ ಗಂಟೆಯ ಅವಧಿಯ ಚಿತ್ರವಾಗಿದೆ. ಗಾಯತ್ರಿ ರಾವ್ ಅವರು ಈ ಕಿರು ಚಿತ್ರ ನಿರ್ದೇಶಿಸಿದ್ದಾರೆ. ರಾಜೇಶ್ ಚಕ್ರವರ್ತಿ ನಿರ್ದೇಶಿಸಿದ ಪುಟ್ಟ ಮೂರು ನಿಮಿಷದ ಅನಿಮೇಷನ್ ಚಿತ್ರ Dhak – The Drum ಕೂಡ ತೀರ್ಪುಗಾರರ ಗಮನ ಸೆಳೆದೆದ್ದು, ಬಹುಮಾನ ತನ್ನದಾಗಿಸಿಕೊಂಡಿದೆ. ಈ ಪ್ರಶಸ್ತಿಗೆ ೨೦೦ಕ್ಕೂ ಹೆಚ್ಚು ಸ್ಪರ್ಧಿಗಳು ಕಿರುಚಿತ್ರಗಳನ್ನು ಕಳುಹಿಸಿದ್ದರು. ಅವುಗಳಲ್ಲಿ ೫೦ ಕಿರುಚಿತ್ರಗಳು ಮೊದಲ ಸುತ್ತಿನಲ್ಲಿ ಆಯ್ಕೆಯಾದವು. ಅಂತಿಮವಾಗಿ ೧೨ ಅನಿಮಷನ್ ಕಿರುಚಿತ್ರಗಳನ್ನು ಶಾರ್ಟ್ ಲಿಸ್ಟ್ ಮಾಡಿ ಎರಡು ಚಿತ್ರಗಳಿಗೆ ಬಹುಮಾನ ನೀಡಲಾಗಿದೆ. ಶಾರ್ಟ್ ಲಿಸ್ಟ್‌ಗೆ ಆಯ್ಕೆಯಾದ ೧೨ ಕಿರುಚಿತ್ರಗಳನ್ನು ಕ್ಯಾಲಿಫೋರ್ನಿಯಾದಲ್ಲಿ ನಡೆಯುವ ಅನಿಮೇಷನ್ ಚಿತ್ರ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತದೆ.
“ಅನಿಮೇಷನ್ ಎನ್ನುವುದು ಈಗ ಬೃಹತ್ ಉದ್ಯೋಗ ಕ್ಷೇತ್ರ. ಈ ಕ್ಷೇತ್ರಕ್ಕೆ ಸಂಬಂಧಪಟ್ಟ ೨ಡಿ ಅಥವಾ ೩ಡಿ ಕೌಶಲ ಕಲಿತವರು ಉತ್ತಮ ಅವಕಾಶ ತಮ್ಮದಾಗಿಸಿಕೊಳ್ಳಬಹುದು. ASIFA ಬಹುಮಾನ ನೀಡಿದ ೩ ನಿಮಿಷದ ಚಿತ್ರವನ್ನೇ ತೆಗೆದುಕೊಳ್ಳಿ. ಈ ಪುಟ್ಟ ಚಿತ್ರವು ಅಂತಾರಾಷ್ಟ್ರೀಯ ಮನ್ನಣೆ ಪಡೆದುಕೊಂಡಿದೆ. ಈ ಕ್ಷೇತ್ರದ ಕೌಶಲ್ಯಗಳನ್ನು ಕಲಿತು ಇಂತಹ ಸಾಧನೆ ಮಾಡಿದರೆ ಭವಿಷ್ಯದಲ್ಲಿ ಒಳ್ಳೆಯ ಅವಕಾಶ ದೊರಕಲಿದೆ. ಅನಿಮೇಷನ್ ಜಗತ್ತಿಗೆ ಅವಶ್ಯವಿರುವಷ್ಟು ಪ್ರತಿಭಾನ್ವಿತರ ಲಭ್ಯತೆ ಇಲ್ಲ. ಹೀಗಾಗಿ, ಕ್ರಿಯೆಟವಿಟಿ ಇರುವ ವಿದ್ಯಾರ್ಥಿಗಳು ಇಂತಹ ಅವಕಾಶವನ್ನು ತಮ್ಮದಾಗಿಸಿಕೊಳ್ಳಬೇಕು’ಎಂದು ರಾಜಾಜಿನಗರದಲ್ಲಿರುವ ಕ್ಯಾಡ್‌ನೆಸ್ಟ್ ಅನಿಮೇಷನ್ ಸ್ಟುಡಿಯೋದ ನಿರ್ದೇಶಕರಾದ ಪ್ರಕಾಶ್ ಗೌಡ ಹೇಳಿದ್ದಾರೆ.