ಸ್ನೇಹಿತರೇ, ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಅಂಕಗಳ ಹಿಂದೆ ಬಿದ್ದಿದ್ದಾರೆ. ಆದರೆ, ಯಾರಲ್ಲಿ ಕ್ರಿಯಾಶೀಲತೆ, ಹೊಸತು ಕಲಿಯುವ ಆಸಕ್ತಿ ಇರುತ್ತದೆಯೋ ಅವರು ಅದ್ಭುತ ಸಾಧನೆ ಮಾಡುತ್ತಾರೆ. ಇವತ್ತಿನ ಕನ್ನಡ ಕ್ಯಾಡ್ನೆಸ್ಟ್ನಲ್ಲಿ rank ಅಗತ್ಯವಿಲ್ಲದ ಕೆಲವು ಅದ್ಭುತ ಕರಿಯರ್ ಅವಕಾಶಗಳ ಕುರಿತು ತಿಳಿದುಕೊಳ್ಳೋಣ.
ಶೇಕಡ 90ಕ್ಕಿಂತ ಹೆಚ್ಚು ಅಂಕ ಪಡೆದವರೆಲ್ಲ ಎಂಬಿಬಿಎಸ್, ಎಂಜಿನಿಯರಿಂಗ್ ಸೀಟುಗಳಿಗೆ ಪ್ರಯತ್ನಿಸುತ್ತಿದ್ದಾರೆ. ಶೇಕಡ 40, ಶೇಕಡ 50, ಶೇಕಡ 60 ಇತ್ಯಾದಿ ಅಂಕ ಪಡೆದವರೆಲ್ಲ ಇಂತಹ ಸೀಟು ಪಡೆಯುವ ಟೆನ್ಷನ್ ಇಲ್ಲದೆ ಹಾಯಾಗಿರಬಹುದು. ಈ ರೀತಿ ಕಡಿಮೆ ಅಂಕ ಪಡೆದವರೂ ತಮ್ಮ ಕರಿಯರ್ ಬಗ್ಗೆ ಸೀರಿಯಸ್ ಆಗಿ ಯೋಚನೆ ಮಾಡಿದರೆ ಹೆಚ್ಚು ಅಂಕ ಪಡೆದವರನ್ನು ಮೀರಿಸುವಂತೆ ಸಾಧನೆ ಮಾಡಬಹುದು.
ಫೋಟೊಗ್ರಫಿ
ಈಗಿನ ಸೆಲ್ಫಿ, ಮೊಬೈಲ್ ಫೋಟೊಗ್ರಫಿ ಕಾಲದಲ್ಲಿಯೂ ವೃತ್ತಿಪರ ಛಾಯಾಗ್ರಾಹಕರಿಗೆ ಬೇಡಿಕೆ ಕಡಿಮೆಯಾಗಿಲ್ಲ. ಕಾಲೇಜಲ್ಲಿ ಕಡಿಮೆ ಅಂಕ ಪಡೆದಿದ್ದರೂ ಊರಲ್ಲಿ ಮದುವೆ ಫೋಟೊಗ್ರಫಿ ಮಾಡಿ ಹೆಚ್ಚು ಹಣ ಸಂಪಾದಿಸಬಹುದು. ಪತ್ರಿಕಾ ಛಾಯಾಗ್ರಾಹಕ ವೃತ್ತಿ ಮಾಡಬಹುದು. ಫೊಟೊಗ್ರಫಿ ಕುರಿತೂ ಇನ್ನೂ ಹೆಚ್ಚು ಹುಚ್ಚು ಇದ್ದರೆ ವನ್ಯಜೀವಿ ಛಾಯಾಗ್ರಾಹಕ ಇತ್ಯಾದಿ ವೃತ್ತಿಗಳನ್ನು ಮಾಡಬಹುದು. ಇಂತಹ ಹುದ್ದೆಗಳನ್ನು ಪಡೆಯಲು ಫೊಟೊಗ್ರಫಿಗೆ ಸಂಬಂಧಪಟ್ಟ ವೃತ್ತಿಪರ ಕೋರ್ಸ್ ಮಾಡಿದ್ದರೆ ಉತ್ತಮ.
ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಪರರು
ಈಗ ಡಿಜಿಟಲ್ ಕ್ಷೇತ್ರದಲ್ಲಿ ಪರಿಣತಿ ಪಡೆದವರಿಗೆ ಅತ್ಯುತ್ತಮ ಬೇಡಿಕೆಯಿದೆ. ಫೇಸ್ಬುಕ್, ಟ್ವಿಟ್ಟರ್, ಯೂಟ್ಯೂಬ್, ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಗ್ರಾಹಕರನ್ನು ತಲುಪುವ ಕೌಶಲವನ್ನು ಸುಲಭವಾಗಿ ನಿಮ್ಮದಾಗಿಸಿಕೊಳ್ಳಬಹುದು. ಭವಿಷ್ಯದಲ್ಲಿಯಂತೂ ಈ ಕ್ಷೇತ್ರದಲ್ಲಿ ಪರಿಣತಿ ಪಡೆದವರಿಗೆ ಸಾಕಷ್ಟು ಉದ್ಯೋಗಾವಕಾಶ ಇರಲಿದೆ.
ಟ್ರಾವೆಲ್ ಬ್ಲಾಗರ್
ರೆಕ್ಕೆ ಕಟ್ಟಿಕೊಂಡು ಸದಾ ಜಗತ್ತು ಸುತ್ತಲು ಬಯಸುವಿರಾ? ಪ್ರವಾಸ ಹೋಗುವುದು ಮತ್ತು ಪ್ರವಾಸದ ಕುರಿತು ಬ್ಲಾಗ್ನಲ್ಲಿ ಮಾಹಿತಿ ನೀಡುವುದು ನಿಮ್ಮ ಅಚ್ಚುಮೆಚ್ಚಿನ ಸಂಗತಿಯೇ? ಹಾಗಾದರೆ, ಈ ಜಗತ್ತೇ ನಿಮ್ಮ ಆಫೀಸ್. ಯಾವುದಾದರೂ ಟ್ರಾವೆಲ್ ಟೆಲಿವಿಷನ್ ಚಾನೆಲ್ಗೆ ಸೇರಿರಿ ಮತ್ತು ಜನರಿಗೆ ಅತ್ಯುತ್ತಮ ಪ್ರವಾಸಿ ಸ್ಥಳಗಳನ್ನು ಪರಿಚಯಿಸಿರಿ. ಎಲ್ಲಿಗೆ ಹೋಗಬೇಕು? ಎಲ್ಲಿ ತಿನ್ನಬೇಕು? ಎಲ್ಲಿ ಉಳಿದುಕೊಳ್ಳಬೇಕು ಇತ್ಯಾದಿ ಮಾರ್ಗದರ್ಶನಗಳನ್ನು ನೀಡಿರಿ. ಬ್ಲಾಗಿಂಗ್ ಮಾಡುತ್ತವೂ ಸ್ಪಾನ್ಸರ್ಷಿಪ್ ಇತ್ಯಾದಿಗಳ ಮೂಲಕ ಕೈತುಂಬಾ ಹಣ ಸಂಪಾದಿಸಬಹುದಾಗಿದೆ.
ಇಂಟಿರಿಯರ್ ಡಿಸೈನಿಂಗ್
ನಿಮ್ಮ ಬ್ಯಾಗ್ನಲ್ಲಿ ಐಡಿಯಾಗಳು ಮತ್ತು ಬಣ್ಣಗಳು ಇದ್ದರೆ ನೀವು ಇಂಟರಿಯರ್ ಡಿಸೈನ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಕಟ್ಟಡ, ಮನೆ, ಆಫೀಸ್ ಇತ್ಯಾದಿಗಳ ಒಳಾಂಗಣ ವಿನ್ಯಾಸಗೊಳಿಸುವವರಿಗೆ ಅತ್ಯುತ್ತಮ ಬೇಡಿಕೆಯಿದ್ದು, ಇದಕ್ಕೆ ಸಂಬಂಧಪಟ್ಟಂತೆ ಕೋರ್ಸ್ ಮಾಡಿದ್ದರೆ ಉತ್ತಮ.
ಕಾಮಿಡಿ ಹೇಳಲು ಗೊತ್ತೆ?
ಈ ಒತ್ತಡದ ಜಗತ್ತಿನಲ್ಲಿ ಜನರು ನಗುವಿಗಾಗಿ, ನಗಿಸುವರಿಗಾಗಿ ಕಾಯುತ್ತಿದ್ದಾರೆ. ಆಕರ್ಷಕ ಜೋಕ್ಸ್ ಹೇಳುತ್ತ ವೀಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುವವರಿಗೆ ಇಂದು ಬಹುಬೇಡಿಕೆಯಿದೆ. ನೀವು ಇಂತಹ ಕೌಶಲ ಪ್ರದರ್ಶಿಸುವ ಮೂಲಕ ದೇಶವಿದೇಶಗಳಲ್ಲಿ ಬಹುಬೇಡಿಕೆಯ ಸ್ಟಾಂಡಪ್ ಕಾಮಿಡಿಯನ್ ಆಗಿ ಜನಪ್ರಿಯತೆ ಪಡೆಯಬಹುದು. ಯೂಟ್ಯೂಬ್ನಲ್ಲಿ ನಿಮ್ಮ ಕಾಮಿಡಿಗಳು ಸೂಪರ್ಹಿಟ್ ಆದರಂತೂ ಗೂಗಲ್ ಆ್ಯಡ್ಸೆನ್ಸ್ನ ಜಾಹೀರಾತುಗಳಿಂದ ಕೈತುಂಬಾ ಹಣಗಳಿಸಬಹುದು. ಸ್ಟೇಜ್ಗಳಲ್ಲಿ ಒಂದು ಪ್ರದರ್ಶನಕ್ಕೆ ಒಬ್ಬರಿಗೆ ಇಂತಿಷ್ಟು ಟಿಕೇಟ್ ಎಂದು ನಿಗದಿಪಡಿಸಿಯೂ ಕೈತುಂಬಾ ಹಣ ಸಂಪಾದಿಸುವ ಸಾಕಷ್ಟು ಸ್ಟಾಂಡಪ್ ಕಾಮಿಡಿ ಕಲಾವಿದರು ಇದ್ದಾರೆ. ವಿಶೇಷವೆಂದರೆ ಸ್ಟಾಂಡಪ್ ಕಾಮಿಡಿ ಕಲಾವಿದರು ಆಗಲು ನೀವು ಯಾವುದೇ ರ್ಯಾಂಕ್ ಪಡೆದಿರಬೇಕಿಲ್ಲ. ನೀವು ಕಡಿಮೆ ಅಂಕ ಪಡೆದಿರುವುದನೇ ಜೋಕ್ಸ್ನಂತೆ ಹೇಳಿ ಚಪ್ಪಾಳೆ ಗಿಟ್ಟಿಸಬಹುದು!
ಅನಿಮೇಷನ್ ಕ್ಷೇತ್ರ
ನಿಮ್ಮ ಎಸ್ಎಸ್ಎಲ್ಸಿ, ಪಿಯುಸಿ ಅಂಕ ನೋಡದೆ ನಿಮ್ಮಲ್ಲಿರುವ ಅನಿಮೇಷನ್ ಸ್ಕಿಲ್ ಮಾತ್ರ ಪರಿಗಣಿಸಿ ಅವಕಾಶ ನೀಡುವ ಕ್ಷೇತ್ರವಿದು. ಅನಿಮೇಷನ್ ಕುರಿತು ಸಂಪೂರ್ಣ ವಿವರವನ್ನು ಪ್ರತ್ಯೇಕ ಬ್ಲಾಗ್ ಪೋಸ್ಟ್ನಲ್ಲಿ ಬರೆದಿದ್ದೇವೆ. ಅದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಸಾರ್ವಜನಿಕ ಸಂಪರ್ಕ
ಪಬ್ಲಿಕ್ ರಿಲೇಷನ್ ವಿಭಾಗವೂ ಈಗ ಬಲುಬೇಡಿಕೆ ಪಡೆದುಕೊಳ್ಳುತ್ತಿದೆ. ಪತ್ರಿಕೆ, ಟೀವಿ ಇತ್ಯಾದಿಗಳೊಂದಿಗೆ ಸಂಪರ್ಕ ಕಲ್ಪಿಸುವ ಪಬ್ಲಿಕ್ ರಿಲೇಷನ್ ವಿಭಾವನ್ನು ಬಹುತೇಕ ಕಂಪನಿಗಳು, ಬ್ಯಾಂಕ್ಗಳು ಬಳಸುತ್ತವೆ. ಸಾರ್ವಜನಿಕ ಸಂಪರ್ಕ ಅಕಾರಿ ಹುದ್ದೆಯನ್ನು ಪಡೆಯಲು ಪೂರಕ ಕೋರ್ಸ್ ಮಾಡಿದ್ದರೆ ಉತ್ತಮ.
ಲೆಕ್ಕಪರಿಶೋಧನೆ
ನಿಮಗೆ ಲೆಕ್ಕಮಾಡುವುದು ಇಷ್ಟವೇ? ಎಕ್ಸೆಲ್ ಶೀಟ್, ಅಂಕೆಗಳು ಆಕರ್ಷಕವಾಗಿ ಕಾಣಿಸುವುದೇ? ಯಾವುದಾದರೂ ಟ್ಯಾಲಿ ಕೋರ್ಸ್ ಅಥವಾ ಎಂಎಸ್ ಆಫೀಸ್, ಎಕ್ಸೆಲ್ ಕೋರ್ಸ್ಗಳನ್ನು ಕಲಿಯಿರಿ. ಅಥವಾ ಕಾಮರ್ಸ್ ವಿಭಾಗದ ಶಿಕ್ಷಣವನ್ನು ಪಡೆಯಿರಿ. ಅಕೌಂಟಿಂಗ್ಗೆ ಸಂಬಂಧಪಟ್ಟಂತೆ ನಮ್ಮಲ್ಲಿ ಹತ್ತು ಹಲವು ಕೋರ್ಸ್ಗಳಿದ್ದು, ಹೆಚ್ಚಿನ ವಿವರಕ್ಕೆ ಭೇಟಿ ನೀಡಿ ಅಥವಾ ಕರೆ ಮಾಡಿ.
ಅಡ್ಮಿನಿಸ್ಟ್ರೇಷನ್
ವಿವಿಧ ಕಂಪನಿಗಳ ಆಡಳಿತ ವಿಭಾಗದಲ್ಲಿ ಸಾಕಷ್ಟು ಹುದ್ದೆಗಳು ಇರುತ್ತವೆ. ಸೂಪರ್ವೈಸಿಂಗ್, ಅಡ್ಮಿನಿಸ್ಟ್ರೇಟಿಂಗ್ ಇತ್ಯಾದಿ ಉದ್ಯೋಗಗಳಿಗೆ ಪ್ರಯತ್ನಿಸಬಹುದು. ಆಫೀಸ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಮಾಡಿದ್ದರೆ ಇಂತಹ ಉದ್ಯೋಗಗಳನ್ನು ಸುಲಭವಾಗಿ ಪಡೆಯಬಹುದು.
ಸಮೂಹ ಸಂವಹನ
ಟೆಲಿವಿಷನ್ ಆ್ಯಂಕರ್, ಪತ್ರಕರ್ತ ಅಥವಾ ಕ್ಯಾಮೆರಾ ಪ್ರೊಡಕ್ಷನ್ ಎಂಜಿನಿಯರ್, ಸೌಂಡ್ ಎಂಜಿನಿಯರ್ ಇತ್ಯಾದಿ ಹತ್ತು ಹಲವು ಬಗೆಯ ಸಮೂಹ ಸಂವಹನ ವಿಭಾಗದ ಹುದ್ದೆಗಳನ್ನು ಪಡೆಯಲು ನೀವು ಕಾಲೇಜಿನಲ್ಲಿ ಪಡೆದ ರ್ಯಾಂಕ್ ಪ್ರಮುಖ ಮಾನದಂಡವಾಗಿರುವುದಿಲ್ಲ. ಇಂತಹ ವಿಭಾಗದಲ್ಲಿ ನಿಮಗೆ ಯಾವುದು ಸೂಕ್ತವೆನಿಸುವುದೋ ಅದಕ್ಕೆ ಸಂಬಂ`Àಪಟ್ಟಂತೆ ಯಾವುದಾದರೂ ಕೋರ್ಸ್ ಮಾಡಿ ಉದ್ಯೋಗಾವಕಾಶಕ್ಕೆ ಪ್ರಯತ್ನಪಡಬಹುದು.
ಫ್ಯಾಷನ್ ಡಿಸೈನಿಂಗ್
ಫ್ಯಾಷನ್ ಉದ್ಯಮವೂ ಈಗ ಅತ್ಯುತ್ತಮ ಕರಿಯರ ಆಯ್ಕೆ. ಉತ್ತಮ ವಿನ್ಯಾಸಗಳನ್ನು ಕಲ್ಪಿಸಿಕೊಳ್ಳಿ. ನಿಮ್ಮ ಕಲ್ಪನೆಯನ್ನು ರೇಖಾಚಿತ್ರದ ಮೂಲಕ ಅಭಿವ್ಯಕ್ತಪಡಿಸಿ. ರೇಖಾಚಿತ್ರವನ್ನು ವಿನ್ಯಾಸವಾಗಿ ಪರಿವರ್ತಿಸಿ. ನೀವು ನಿಮ್ಮ ಸ್ವಂತ ಡಿಸೈನ್ ಸ್ಟುಡಿಯೋ ಸ್ಥಾಪಿಸಬಹುದು ಅಥವಾ ಫ್ಯಾಷನ್ ಡಿಸೈನಿಂಗ್ ಉದ್ಯಮದಲ್ಲಿ ಉದ್ಯೋಗಿಯಾಗಿ ಕೆಲಸ ಮಾಡಬಹುದು.
ಪ್ರವಾಸೋದ್ಯಮ
ಟ್ರಾವೆಲ್ ಕನ್ಸಲ್ಟೆಂಟ್, ಟಿಕೆಟಿಂಗ್ ಅಥವಾ ಪ್ರವಾಸಿ ಮಾರ್ಗದರ್ಶಕರಾಗಿ ಉತ್ತಮ ಕರಿಯರ್ ರೂಪಿಸಿಕೊಳ್ಳಬಹುದು. ಇದಕ್ಕೆ ಸಂಬಂಧಪಟ್ಟಂತೆ ಡಿಪ್ಲೊಮಾ ಅಥವಾ ಸರ್ಟಿಫಿಕೇಷನ್ ಕೋರ್ಸ್ ಪಡೆಯಿರಿ. ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಜಗತ್ತು ಸುತ್ತುವ ಅವಕಾಶ ಹೇರಳವಾಗಿರುತ್ತದೆ.
ವೆಬ್ ವಿನ್ಯಾಸ
ಈಗಿನ ಟೆಕ್ ಜಗತ್ತಿನಲ್ಲಿ ವೆಬ್ ವಿನ್ಯಾಸಕರಿಗೆ ಬೇಡಿಕೆ ಹೆಚ್ಚಾಗಿದೆ. ಇದಕ್ಕಾಗಿ ನೀವು ಕೋಡಿಂಗ್, ಪ್ರೊಗ್ರಾಮಿಂಗ್ ಭಾಷೆಗಳನ್ನು ಕಲಿಯಬೇಕು. ಈ ಕೋರ್ಸ್ ಹೆಚ್ಚು ದುಬಾರಿಯಲ್ಲ. ಹೆಚ್ಚಿನ ವಿವರಕ್ಕೆ ಇಲ್ಲಿಗೆ ಭೇಟಿ ನೀಡಿ.
ಇವೆಂಟ್ ಮ್ಯಾನೇಜ್ಮೆಂಟ್
ಕಾರ್ಯಕ್ರಮಗಳನ್ನು ಆಯೋಜಿಸುವುದರಲ್ಲಿ ನಿಮಗೆ ಆಸಕ್ತಿ ಇದ್ದರೆ ಇವೆಂಟ್ ಮ್ಯಾನೇಜ್ಮೆಂಟ್ ಅನ್ನು ನಿಮ್ಮ ಕರಿಯರ್ ಆಗಿ ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕೆ ಸಂಬಂಧಪಟ್ಟಂತೆ ಕೋರ್ಸ್ ಮಾಡಿದರೆ ಉತ್ತಮ.
ಇನ್ನಷ್ಟು ಅವಕಾಶಗಳು
ಕಡಿಮೆ ಅಂಕ ಪಡೆದು ಜಗತ್ತೇ ಬೆರಗಾಗುವಂತೆ ಸಾಧ ನೆ ಮಾಡಿದ ಸಾಕಷ್ಟು ಜನರು ನಮ್ಮ ನಿಮ್ಮ ಇದ್ದಾರೆ. ಹೀಗಾಗಿ ಅಂಕ ಕಡಿಮೆ ಬಂದರೆ ಕುಗ್ಗದೆ ಜಗತ್ತೇ ಅಚ್ಚರಿಪಡುವಂತೆ ಯಾವುದಾದರೂ ಕ್ಷೇತ್ರವನ್ನು ಆಯ್ದುಕೊಳ್ಳಿ. ಮೇಲೆ ತಿಳಿಸಿರುವ ಕರಿಯರ್ ಮಾತ್ರವಲ್ಲದೆ ಸಾಫ್ಟ್ ಸ್ಕಿಲ್ಸ್/ಟೆಕ್ನಿಕಲ್ ಟ್ರೈನರ್, ಟೀಚಿಂಗ್, ತರಬೇತುದಾರರು, ಜುವೆಲರಿ ಡಿಸೈನರ್, ಆ್ಯಪ್ ಡೆವಲಪರ್, ಸಾಫ್ಟ್ವೇರ್ ಡೆವಲಪರ್ ಆಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ರಾಜಕಾರಣಿಯೂ ನೀವಾಗಬಹುದು.
ನಿಮ್ಮ ಅಂಕ ನೋಡದೆ ಉದ್ಯೋಗ ಕೊಡಿಸಲು ನೆರವಾಗುವ ನೂರಕ್ಕೂ ಹೆಚ್ಚು ಕೋರ್ಸ್ಗಳ ವಿವರ ಇಲ್ಲಿದೆ. ಶುಭವಾಗಲಿ.